ಶಿವಗಣೇಶ್ ನಿರ್ದೇಶನದಲ್ಲಿ ‘ತ್ರಾಟಕ’
Posted date: 16 Wed, Nov 2016 – 10:19:24 AM

ಈ ಹಿಂದೆ ಅಖಾಡ, ಹೃದಯದಲಿ ಇದೇನಿದು, ಜಿಗರ್‌ಥಂಡ ಸಿನಿಮಾಗಳನ್ನು ನಿರ್ದೇಶಿಸಿದ್ದ ಶಿವಗಣೇಶ್ ತಮ್ಮ ನಾಲ್ಕನೇ ಸಿನಿಮಾವನ್ನು ಆರಂಭಿಸುತ್ತಿದ್ದಾರೆ. ‘ತ್ರಾಟಕ’ ಹೆಸರಿನ ಈ ಚಿತ್ರ ಒಂದೇ ಹಂತದಲ್ಲಿ ಚಿತ್ರೀಕರಣವನ್ನು ಮುಕ್ತಾಯಗೊಳಿಸುವ ತಯಾರಿಯಲ್ಲಿದೆ. ಆಸ್ತಾ ಸಿನಿಮಾಸ್ ಮೂಲಕ ರಾಹುಲ್ ಐನಾಪುರ ಅವರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
     ರಮ್ಯ ಚೈತ್ರಕಾಲ, ಕೊಂಚಾವರಂ, ಅಖಾಡ ಮತ್ತು ತಾರೆ ಸಿನಿಮಾಗಳಲ್ಲಿ ನಟಿಸಿದ್ದ ರಾಹುಲ್ ಐನಾಪುರ್ ಅವರು ಈ ‘ತ್ರಾಟಕ’ ಚಿತ್ರಕ್ಕೆ ನಾಯಕರಾಗಿದ್ದಾರೆ. ‘ಒರಟ ಐ ಲವ್ ಯೂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಮತ್ತು ಕಿಚ್ಚ ಸುದೀಪ ಅವರ ನಮ್ಮಣ್ಣ ಚಿತ್ರದಲ್ಲಿ ತಂಗಿಯಾಗಿ ಕಾಣಿಸಿಕೊಂಡಿದ್ದ ಹೃದಯಾ ‘ತ್ರಾಟಕ’ ಚಿತ್ರದ ನಾಯಕಿ.
     ಪೊಲೀಸ್ ವ್ಯವಸ್ಥೆಯ ಸುತ್ತ ಹೆಣೆಯಲಾದ, ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾವಸ್ತು ‘ತ್ರಾಟಕ’ ಚಿತ್ರದ್ದು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಳ್ಳುವ ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಒಂದು ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಕೇರಳದ ಮುನ್ನಾರ್‌ಗೆ ತೆರಳಲಿದೆ.
ಅರುಣ್ ಪುರದ ಸಂಗೀತ ನಿರ್ದೇಶನ, ವಿನೋದ್ ಭಾರತಿ ಛಾಯಾಗ್ರಹಣ, ಸುರೇಶ್ ಆರ‍್ಮುಗಂ ಸಂಕಲನ, ಶಿವಕುಮಾರ್ ಕಲಾನಿರ್ದೇಶನ, ಕಲೈ ನೃತ್ಯನಿರ್ದೇಶನವಿರುವ ಈ ಚಿತ್ರಕ್ಕೆ ಎ.ಆರ್. ಸಾಯಿರಾಮ್ ಸಂಭಾಷಣೆ ರಚಿಸಿದ್ದಾರೆ. ನರು ನಾರಾಯಣ್ ಮತ್ತು ಮಹಾಕೀರ್ತಿ ಈ ಚಿತ್ರಕ್ಕೆ ಕಥೆ ಒದಗಿಸಿದ್ದಾರೆ. ಸ್ವತಃ ನಿರ್ದೇಶಕ ಶಿವಗಣೇಶ್ ಅವರೇ ಚಿತ್ರಕತೆ ಬರೆದು ನಿರ್ದೇಶನದ ಜವಾವ್ದಾರಿ ಹೊತ್ತಿದ್ದಾರೆ.
 ಇನ್ನು ಈ ಚಿತ್ರದಲ್ಲಿ ನಾಯಕ ರಾಹುಲ್ ಐನಾಪುರ ಮತ್ತು ನಾಯಕಿ ಹೃದಯಾ ಅವರೊಂದಿಗೆ ಅದ್ವಿಕ್ ಜಯರಾಂ, ಭವಾನಿ ಪ್ರಕಾಶ್, ನಂದಗೋಪಾಲ, ನಿಖಿತಾ ಮುಂತಾದವರ ತಾರಾಗಣವಿದೆ.
     ಈ ಚಿತ್ರದ ಅತಿಮುಖ್ಯವಾದ ಅಂಶವೆಂದರೆ, ಪ್ರಸಿದ್ದ ರಂಗ ಕಲಾವಿದ ಮತ್ತು ಮೈಮ್ ನಿರ್ದೇಶಕ ವಾಲ್ಟರ್ ಡಿಸೋಜ ಅವರಿಂದ ಚಿತ್ರತಂಡದ ಎಲ್ಲ ಕಲಾವಿದರಿಗೂ ವಿಶೇಷ ತರಬೇತಿ ಕೊಡಿಸಲಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಪ್ರತಿಯೊಬ್ಬ ನಟರೂ ಒಬ್ಬರಿಗೊಬ್ಬರು ಸಾಥ್ ಕೊಡುತ್ತಾ ಸರಾಗವಾಗಿ ನಟಿಸಲು ಅನುಕೂಲವಾಗಲಿ ಎನ್ನುವ ಕಾರಣಕ್ಕೆ, ಮತ್ತು ಈ ಚಿತ್ರ ಕಲಾವಿದರಿಂದ ತೀರಾ ಸಹಜವಾದ ಅಭಿನಯವನ್ನು ಬಯಸುತ್ತಾದ್ದರಿಂದ ವಾಲ್ಟರ್ ಡಿಸೋಜ ಅವರಿಂದ ನಟನೆಯ ನಾನಾ ಮಜಲುಗಳನ್ನು ಕಲಾವಿದರಿಗೆ ಕಲಿಸಲಾಗಿದೆ.

‘ತ್ರಾಟಕ’ ಎಂದರೆ ಯೋಗವಿದ್ಯೆಯ ಭಾಷೆಯಲ್ಲಿ ಏಕಾಗ್ರತೆ ಎಂಬ ಅರ್ಥ ಹೊರಹೊಮ್ಮುತ್ತದಂತೆ. ಪೊಲೀಸ್ ವ್ಯವಸ್ಥೆಯ ಸುತ್ತ ಹೆಣೆಯಲಾದ ಈ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ತ್ರಾಟಕ’ ಚಿತ್ರದಲ್ಲಿ ಏಕಾಗ್ರತೆ ಯಾವ ಬಗೆಯ ಪಾತ್ರ ವಹಿಸುತ್ತದೆ ಎನ್ನುವುದು ತೆರೆಮೇಲೆ ಅನಾವರಣಗೊಳ್ಳಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed